ಬುಧವಾರ, ಅಕ್ಟೋಬರ್ 27, 2010

ಮನದ ಮಾತು, ಭಾಷೆ ಹಾಗೂ ಸ್ಪರ್ಧಾತ್ಮಕ ಜಗತ್ತು

ಇಂದು ನಾವು ಬದುಕುತ್ತಿರುತ್ತಿರುವದು ಸ್ಪರ್ಧಾತ್ಮಕ ಜಗತ್ತಿನಲ್ಲಿ. ಸ್ಪರ್ಧೆಯೆ ಜಗತ್ತಿನ ನಿಯಮ. ಈ ಸ್ಪರ್ಧೆಯಲ್ಲಿ ನಾವು ಉಳಿಯಬೇಕು ಬೆಳೆಯಬೇಕು, ಅಲ್ಲದೇ ಗೆಲ್ಲಬೇಕು. ಈ ಸ್ಪರ್ಧೆ ಎನ್ನುವದು ಸಾಮಾಜಿಕವಾಗಿರಬಹುದು, ಅರ್ಥಿಕವಾಗಿರಬಹುದು ಅಥವಾ ಇನ್ನಾವುದೆ ರೀತಿಯಿಂದ ಇರಬಹುದು. ಹೀಗಿರುವಾಗ ಈ ಜಗತ್ತು ಹೀಗಿದೆ,ಬದಲಾವಣೆಗಳು ಹೀಗೆ ಆಗುತ್ತಿವೆ ಎಂಬ ಸ್ಪಷ್ಟ ಅರಿವು,ಜ್ನಾನ ಅಗತ್ಯ. ಅಷ್ಟೇ ಅಲ್ಲ ಆ ಜ್ಝಾನವನ್ನು ಬಳಸಿಕೊಳ್ಳುವ ಬುದ್ದಿ, ಮನಸ್ಸು, ಕ್ರಿಯಾಶೀಲತೆ,ಸಂವಹನ ಇತ್ಯಾದಿಗಳು ಅಷ್ಟೇ ಮಹತ್ವ. ಇವೆಲ್ಲವುಗಳಿಗೆ ಭಾಷೆಯ ಅಗತ್ಯ ಇದ್ದೆ ಇದೆ.
ಭಾಷೆ ಇರುವದು ನಮಗೆ ಅರಿವನ್ನು ಕೊಡಲು, ನಾವು ಉಳಿದು ಬೆಳೆಯಲು ಸಹಾಯ ಮಾಡಲು. ಭಾಷೆಗಾಗಿ ನಾವಿಲ್ಲ. ನಮ್ಮ ಉಳಿವಿಕೆಗೆಗೆ, ಈ ಸ್ಪರ್ಧೆಯಲ್ಲಿ ಸಮರ್ಥರನ್ನಾಗಿ ಮಾಡಿ ಬೆಳೆಯಲು ಭಾಷೆ ಸಹಾಯ ಮಾಡಿದರೆ ಆ ಭಾಷೆ ಉಳಿಯಬೇಕು. ಉದಾಹರಣೆಗೆ ಕನ್ನಡವು ಕನ್ನಡಿಗರನ್ನು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ತರಲು ವಿಫಲವಾದಲ್ಲಿ ಕನ್ನಡ ಉಳಿಯುವ ಅವಶ್ಯಕತೆ ಇಲ್ಲ. ಇಲ್ಲಿ ಯಶಸ್ಸು ಎನ್ನುವದು ಸಮಾಜದ ದೃಷ್ತಿಕೋನದಲ್ಲಿರಬಹುದು, ತಂದೆ ತಾಯಿಗಳ ದೃಷ್ಟಿಕೋನದಲ್ಲಿರಬಹುದು ಅಥವಾ ತನ್ನದೇ ದೃಷ್ಟಿಕೋನದಲ್ಲಿರಬಹುದು. ಇವು ತನಗೆ ಇಷ್ಟವಾದ ಯಶಸ್ಸಿನ ಸ್ವರೂಪ ಯಾವುದೆಂದು ನಿರ್ಧರಿಸಿಕೊಳ್ಳುವದು ಪ್ರತಿಯೊಬ್ಬನಿಗೆ ಬಿಟ್ಟಿದ್ದು.  ಪ್ರತಿಯೊಬ್ಬನೂ ಯಶಸ್ಸು ಎನ್ನುವ ಪದಕ್ಕೆ ಕೊಡುವ ಅರ್ಥ ಹಾಗೂ ಅದಕ್ಕೆ ಭಾಷೆ ಮಾಡುವ ಸಹಾಯದ ಮೇಲೆ ಭಾಷೆಯ ಭವಿಷ್ಯ ನಿಂತಿದೆ. ಆದರೆ ಮೊದಲೇ ಹೇಳಿದಂತೆ ಭಾಷೆಗಾಗಿ ನಾವಿಲ್ಲ, ಭಾಷೆ ಎನ್ನುವದು ನಮಗಾಗಿದೆ, ನಮ್ಮ ಯಶಸ್ಸಿಗಾಗಿದೆ.

 ಇನ್ನು ನನಗೆ ಕನ್ನಡ ಬೇಕೆ, ಬೇಡವೇ ಎನ್ನುವ ಪ್ರಶ್ನೆ. ಇದಕ್ಕೆ ನನ್ನ ಮುಂದಿರುವ ಒಂದು ಸಮಸ್ಯೆಯನ್ನು ಉದಾಹರಿಸುತ್ತೇನೆ. ನನಗೀಗ PHP ಸಿಂಫೋನಿ ಫ್ರೇಂವರ್ಕನ್ನು ಅರಿಯಬೇಕಾಗಿದೆ. ಇದಕ್ಕಾಗಿ ನಾನು ಖಂಡಿತ ಇಂಗ್ಲಿಷನ್ನು ಅವಲಂಬಿಸಲೇಬೇಕಾಗಿದೆ. ಈ ಫ್ರೇಂವರ್ಕನ ಡಾಕ್ಯುಮೆಂಟೇಶನ್ ಕನ್ನಡದಲ್ಲಿ ಇಲ್ಲ. ಒಮ್ಮೆ ಕನ್ನಡದಲ್ಲಿ ಇದ್ದಿದ್ದರೆ ನಾನು ಅದನ್ನು ಅರಿತುಕೊಳ್ಳುವ ವೇಗ ಇಂಗ್ಲಿಷಿನಲ್ಲಿ ಒದುವದಕ್ಕಿಂತ ಎಷ್ಟೋ ಪಟ್ಟು ಹೆಚ್ಚು. ಇರಲಿ, ಯಾವುದೇ ವಿಷಯ ಹೆಚ್ಚು ಹೆಚ್ಚು ಜಟಿಲವಾದಂತೆ ಅದು ಕನ್ನಡದಲ್ಲಿದ್ದರೆ ನಾನು ಅದನ್ನು ಅರಿತುಕೊಳ್ಳು ಸಾಮರ್ಥ್ಯ ಅದೇ ವಿಷಯ ಇನ್ನೊಂದು ಭಾಷೆಯಲ್ಲಿರುವದಕ್ಕಿಂತ ಹೆಚ್ಚು. ಅದರಲ್ಲೂ ವಿಜ್ಞಾನ, ತಂತ್ರಜ್ಞಾನ ವಿಷಯಗಳಿಗೆ ಇದು ಹೆಚ್ಚು ಅನ್ವಯಿಸುತ್ತದೆ. ಇದು ನಾನು. ನಾನಿರುವದು ಹೀಗೆ. ನನ್ನಂತೆಯೇ ಹಲವಿರರಬಹುದು. ನನಗೆ ಹೀಗಿದೆಯೆಂದು ಇನ್ನೊಬ್ಬರಿಗೂ ಹೀಗೇ ಇರಬೇಕು ಎಂದೇನೂ ಇಲ್ಲ. ನನಗೆ ಬೇಕಾದ್ದನ್ನು ಸಾಧಿಸಿಕೊಳ್ಳುವದು ನನ್ನ ಹೊಣೆ. ಅದಕ್ಕಾಗಿಯೇ ನನ್ನ ತಾಣದ  (http://www.jnanakosha.org ) ಉದ್ದೇಶ. ನನ್ನ ಹಾಗೆಯೇ ಕನ್ನಡದಲ್ಲಿ ಹೆಚ್ಚು ವಿಷಯಗಳ ಅವಶ್ಯಕತೆ ಇರುವವರು ಅದಕ್ಕೆ ಸೇರುತ್ತಿದ್ದಾರೆ. ಕನ್ನಡದಲ್ಲಿ ನನಗೆ ಹೆಚ್ಚು ವಿಷಯಗಳು ಬೇಕು ಯಾಕೆಂದರೆ ಯಾವುದೇ ವಿಷಯ ಕನ್ನಡದಲ್ಲಿದ್ಲರೆ ಅದು ಆ ವಿಷಯದಲ್ಲಿ ನನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಪ್ರಯತ್ನಗಳನ್ನು ನಾನು, ನನ್ನಂತವರು ಮಾಡುತ್ತಿರುವದರ ಉದ್ದೇಶವೇನೆಂದರೆ ಕನ್ನಡದಲ್ಲಿ ಹೆಚ್ಚು ವಿಷಯಗಳಿದ್ದರೆ ನನಗೆ , ನನ್ನಂತವರಿಗೆ ಅನುಕೂಲ ಎಂಬ ದುರುದ್ದೇಶ. 

ನಮ್ಮಲ್ಲೊಂದು ಭ್ರಮೆ ಇದೆ. ಏನೆಂದರೆ ವಿಜ್ಞಾನ, ತಂತ್ರ್ರಜ್ಞಾನಗಳು ಇಂಗ್ಲಿಷ್ ಬಿಟ್ಚು ಇತರ ಭಾಷೆಗಳಲ್ಲಿ ಇಲ್ಲ. ಒಮ್ಮೆ ಬೇರೆ ಭಾಷೆಯಲ್ಲಿದ್ದರೂ ಅವು ನಮಗೆ ಅರ್ಥವಾಗುವದಿಲ್ಲ. ಅರ್ಥವಾದರೂ ಅದರಿಂದ ನಮಗೆ ಪ್ರಯೋಜನವಿಲ್ಲ. ಇತ್ಯಾದಿ. ಇವು ನನಗೆ ಕೆಲಮಟ್ಟಿಗೆ ಅಸಂಬದ್ಧವಾಗಿ ಕಾಣಿಸುತ್ತದೆ.  ಇಂಗ್ಲಿಷ್, ಫ್ರೆಂಚ್, ಜರ್ಮನ್ ಭಾಷೆಗಳನ್ನು ಅಲ್ಪ ಮಟ್ಟಿಗೆ ಅರಿತವನಾಗಿ ಈ ಮಾತನ್ನು ಹೇಳುತ್ತಿದ್ದೇನೆ, ಯಾರು ಹೇಳಿದ್ದು ನಿಮಗೆ ವಿಜ್ಞಾನ, ತಂತ್ರಜ್ಞಾನ ಇಂಗ್ಲಿಷ್ ಬಿಟ್ಟು ಇತರ ಭಾಷೆಗಳಲ್ಲಿ ಇಲ್ಲ ಎಂದು. ಜಗತ್ತಿನ ಬಹುತೇಕ ಸರ್ವಶ್ರೇಷ್ಠ ವಿಜ್ಞಾನಿಗಳು ತಮ್ಮ ಸ್ವಂತ ಭಾಷೆಯಲ್ಲೇ ವಿಜ್ಞಾನ, ತಂತ್ರಜ್ಞಾನ ಕಲಿತಿದ್ದಾರೆ ಮತ್ತು ತಮ್ಮ ಭಾಷೆಯಲ್ಲೇ ಸಿದ್ಧಾಂತ ಮಂಡನೆ ಮಾಡಿದ್ದಾರೆ. ಜಗತ್ತಿನ ಸರ್ವಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬನಾದ ಐನ್ ಸ್ಟೈನ್ ತನ್ನ ಸುಪ್ರಸಿದ್ದವಾದ ರಿಲೇಟಿವಿಟಿ ಸಿದ್ಧಾಂತವನ್ನು ಮಂಡಿಸಿದ್ದು ಜರ್ಮನ್ ಭಾಷೆಯಲ್ಲಿ. ಆ ಸಮಯದಲ್ಲಿ ಅವನ ಇಂಗ್ಲಿಷ್ ಜ್ಞಾನ ಅಷ್ಟಕಷ್ಚೆ. ಆಮೇಲೆ ಅದು ಇಂಗ್ಲಿಷ್ ಸೇರಿದಂತೆ ಇನ್ನಿತರ ಭಾಷೆಗಳಿಗೆ ಬೇರೆಯವರಿಂದ ಅನುವಾದಿಸಲ್ಪಟ್ಟಿದೆ.

ಇಂದೂ ಸಹ ಬಹುತೇಕ ಓಪನ್ ಸೋರ್ಸ್ ಟೆಕ್ನಾಲಜಿಗಳು ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಇರುವದನ್ನು ಕಾಣಬಹುದು. ತಮ್ಮ ಭಾಷೆಯಲ್ಲಿದ್ದರೆ ಅರ್ಥಮಾಡಿಕೊಳ್ಳುವದು ಸುಲಭ ಎನ್ನುವದೊಂದೇ ಇದಕ್ಕೆ ಕಾರಣ.
ಇಲ್ಲಿ ಭಾಷೆಯ ಅಳಿವು , ಉಳಿವಿನ ಪ್ರಶ್ನೆಗಿಂತ ನಮಗೆ ಇಂದು ಜೀವಿಸಲು ಯಾವ ಭಾಷೆಯ ಅವಶ್ಯಕತೆ ಇದೆ ಅನ್ನುವದೇ ಮುಖ್ಯ. ನಮ್ಮ ಹೋರಾಟ ನಮ್ಮ ಉಳಿವು, ಅಳಿವಿಗಾಗಿ ಇರಬೇಕು. ಅ ಪ್ರಯತ್ನಕ್ಕೆ ಭಾಷೆಯೂ ಒಂದು ಸಾಧನವಾಗಬೇಕು. ನಮ್ಮ ಭಾಷೆ ನಮ್ಮ ಆರ್ಥಿಕ ಸಾಮಾಜಿಕ ಸವಾಲುಗಳನ್ನು ಎದುರಿಸಲು ಸಹಾಯ ಮಾಡಿದರೆ ಸಹಜವಾಗಿ ಅದು ಉಳಿಯುತ್ತದೆ , ಬೆಳೆಯುತ್ತದೆ.